ಒಕ್ಕಲಿಗ ಸಮುದಾಯಕ್ಕೆ ಅವಮಾನ: ಸಂವಿಧಾನದ ಮೌಲ್ಯಗಳನ್ನು ಗೌರವಿಸಿ, ಅಪರಾಧಿಗೆ ಕಠಿಣ ಶಿಕ್ಷೆ ನೀಡಿ - ಒಕ್ಕೂಟದ ಆಗ್ರಹ

ಮೈಸೂರಿನ ಅಯೋಗ್ಯ ಜಿ.ವಿ. ಸೀತಾರಾಮ್ ಎಂಬ ವ್ಯಕ್ತಿ ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದ ಘಟನೆಯ ಕುರಿತು ಕೋಲಾರ ಜಿಲ್ಲಾ ಒಕ್ಕಲಿಗರ ಪರ ಸಂಘ ಸಂಸ್ಥೆಗಳ ಒಕ್ಕೂಟ ವ್ಯಕ್ತಪಡಿಸಿದ ಆಕ್ರೋಶವನ್ನು ವಿವರಿಸುತ್ತದೆ. ಸೀತಾರಾಮ್ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಒಕ್ಕೂಟದ ಸದಸ್ಯರು ತೆಗೆದುಕೊಂಡ ನಿಲುವುಗಳು ಮತ್ತು ಅಪರಾಧಿಗೆ ಕಠಿಣ ಶಿಕ್ಷೆ ನೀಡುವಂತೆ ಮಾಡಿರುವ ಆಗ್ರಹವನ್ನು ಒಳಗೊಂಡಿದೆ. ಭಾರತೀಯ ಸಂವಿಧಾನದ ಮೌಲ್ಯಗಳನ್ನು ಗೌರವಿಸಲು ಮತ್ತು ಸಮುದಾಯದ ಘನತೆಯನ್ನು ರಕ್ಷಿಸಲು ಕಾನೂನು ಹೋರಾಟ ನಡೆಸಲು ಒಕ್ಕೂಟವು ನಿರ್ಧರಿಸಿದೆ.

Kolar Vokkaliga Federation

8/13/20251 min read

ಒಕ್ಕಲಿಗ ಸಮುದಾಯಕ್ಕೆ ಅವಮಾನ: ಸಂವಿಧಾನದ ಮೌಲ್ಯಗಳನ್ನು ಗೌರವಿಸಿ, ಅಪರಾಧಿಗೆ ಕಠಿಣ ಶಿಕ್ಷೆ ನೀಡಿ - ಒಕ್ಕೂಟದ ಆಗ್ರಹ

ಕೋಲಾರ : ಇಡೀ ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡುವ ರೀತಿಯಲ್ಲಿ ಅಸಭ್ಯ ಮತ್ತು ನಿಂದನೀಯ ಪದಗಳನ್ನು ಬಳಸಿದ ಮೈಸೂರಿನ ನಿವಾಸಿ ಜಿ.ವಿ. ಸೀತಾರಾಮ್ ವಿರುದ್ಧ ಕೋಲಾರ ಜಿಲ್ಲಾ ಒಕ್ಕಲಿಗರ ಪರ ಸಂಘ ಸಂಸ್ಥೆಗಳ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕೋಟಿಗಟ್ಟಲೆ ಜನರ ಭಾವನೆಗಳಿಗೆ ಧಕ್ಕೆ ತಂದಿರುವ ಈ ಅಪರಾಧಿಗೆ ಕಾನೂನಿನಡಿ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದೆ. ಭಾರತೀಯರಾದ ನಾವೆಲ್ಲರೂ ಸಂವಿಧಾನಕ್ಕೆ ಬದ್ಧರಾಗಿದ್ದು, ಅದರ ಮೂಲಭೂತ ಮೌಲ್ಯಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಒಕ್ಕೂಟದ ಸದಸ್ಯರು ಪ್ರತಿಪಾದಿಸಿದ್ದಾರೆ.

ಭಾರತದ ಅನ್ನದಾತರಾಗಿ ದಶಕಗಳಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಒಂದು ಗೌರವಾನ್ವಿತ ಸಮುದಾಯದ ಬಗ್ಗೆ ಸೀತಾರಾಮ್ ಅವರು ಹೀಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಜುಲೈ 21, 2025 ರಂದು ಜಿ.ವಿ. ಸೀತಾರಾಮ್ ಅವರು ಡಿಪಿಕೆ ಪರಮೇಶ್‌ಗೆ ಕರೆ ಮಾಡಿ, "ಎಲ್ಲಾ ಗೌಡ್ರುಗಳು ಆ ನನ್ನ ಮಕ್ಕಳು ಎಲ್ಲ ಏನು ಗೊತ್ತಾ ಲೋಫರ್ ಸೂಳೆಮಕ್ಕಳು ನಿಮಗೆ ಗೊತ್ತಿಲ್ಲ ಪೆರೋಶಿಯಸ್ ಮಕ್ಕಳು ಆಮೇಲೆ ಯಾರನ್ನು ಬದುಕೋಕೆ ಬಿಡಲ್ಲ ಸೂಳೆಮಕ್ಕಳು" ಎಂದು ಕೀಳುಮಟ್ಟದ ಪದಗಳನ್ನು ಬಳಸಿದ್ದಾರೆ. ಈ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರ ಗಮನಕ್ಕೆ ಬಂದಿದೆ.

ಯುವ ರಾಜಕಾರಣಿ ಮತ್ತು ಒಕ್ಕೂಟದ ಸಕ್ರಿಯ ಕಾರ್ಯಕರ್ತ ಅಶೋಕ್ ಗೌಡ ಮಾತನಾಡಿ, ಸೀತಾರಾಮ್ ಅವರನ್ನು ತಕ್ಷಣವೇ ಕಾನೂನಿನಡಿ ತರಬೇಕು. ಕೇವಲ ಮಾಧ್ಯಮಗಳ ಮುಂದೆ ಕ್ಷಮೆಯಾಚಿಸುವುದರಿಂದ ಅವರ ಅಪರಾಧ ಸಮರ್ಥನೆಯಾಗುವುದಿಲ್ಲ. ಅವರು ನ್ಯಾಯಾಲಯದ ಮುಂದೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಠಿಣ ಶಿಕ್ಷೆಗೆ ಆಗ್ರಹ: ಇಂತಹ ಘಟನೆಗಳನ್ನು ಸಹಿಸುವುದಿಲ್ಲ

ಒಕ್ಕೂಟದ ಕಾರ್ಯಕರ್ತ ಪಾಲಕ್‌ಶಾ ಗೌಡ ಮಾತನಾಡಿ, ಇಂತಹ ಜನರಿಗೆ ಕಠಿಣ ಶಿಕ್ಷೆ ವಿಧಿಸುವುದರಿಂದ ಸಮಾಜಕ್ಕೆ ಒಂದು ಸಂದೇಶ ರವಾನೆಯಾಗುತ್ತದೆ. ಯಾವುದೇ ಸಮುದಾಯದ ಬಗ್ಗೆ ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದು ಕ್ಷಮಾರ್ಹವಲ್ಲ. ಒಬ್ಬರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳು ಸಂವಿಧಾನ ವಿರೋಧಿಯಾಗಿದೆ. ಆದ್ದರಿಂದ ಸೀತಾರಾಮ್ ಅವರನ್ನು ಕೂಡಲೇ ಜೈಲಿಗೆ ಕಳುಹಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸಂವಿಧಾನದಲ್ಲಿ ಸುಧಾರಣೆಗಳನ್ನು ತರಬೇಕು ಎಂದು ಆಗ್ರಹಿಸಿದ್ದಾರೆ.

ಮುಳಬಾಗಿಲು ತಾಲ್ಲೂಕು ಒಕ್ಕಲಿಗರ ಸಂಘ ಯುವ ವೇದಿಕೆಯ ಸಂಘಟಕ ಶ್ರೀನಿವಾಸ್ ಸಿ.ವಿ. ಮಾತನಾಡಿ, ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಭಾರತೀಯ ಪ್ರಜೆಯಾಗಿ ಪ್ರತಿಯೊಬ್ಬರ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ನಮ್ಮ ಕರ್ತವ್ಯ. ಇಂತಹ ಪ್ರಕರಣಗಳನ್ನು ನಿರ್ಲಕ್ಷಿಸದೆ ನ್ಯಾಯಾಲಯದ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ತಿಳಿಸಿದರು.

ತಾಲ್ಲೂಕು ಒಕ್ಕಲಿಗರ ಸಂಘದ ಸಿ.ಕೆ. ರೆಡ್ಡಿ ಸಹ ಸೀತಾರಾಮ್ ವಿರುದ್ಧ ಯಾವುದೇ ಕರುಣೆ ತೋರಿಸಬಾರದು ಮತ್ತು ತಕ್ಷಣ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು. ಡಾ. ಉಮೇಶ್ ಕೂಡ ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಒಕ್ಕೂಟದ ನಿಲುವಿಗೆ ಬೆಂಬಲ ಸೂಚಿಸಿದರು.

ಕಾನೂನು ಹೋರಾಟಕ್ಕೆ ಸಿದ್ಧ: ನ್ಯಾಯ ದೊರಕಿಸುವ ತನಕ ಬಿಡುವುದಿಲ್ಲ

ಕೋಲಾರ ತಾಲ್ಲೂಕು ಒಕ್ಕಲಿಗರ ಸಂಘದ ಪ್ರಮುಖರಾದ ವೇಮಗಲ್‌ನ ರಮೇಶ್ ಅವರು ಒಕ್ಕೂಟದ ಪರವಾಗಿ ಮಾತನಾಡಿ, "ಈ ಪ್ರಕರಣವನ್ನು ಕಾನೂನಿನ ವ್ಯಾಪ್ತಿಗೆ ತಂದು ಆರೋಪಿಗೆ ಅವನ ಯೋಗ್ಯತೆಯ ಪರಿಚಯ ಮಾಡುವವರೆಗೂ ನಾವು ಸಮುದಾಯದ ಪ್ರತಿಯೊಬ್ಬರ ಪರವಾಗಿ ನಿಲ್ಲುತ್ತೇವೆ. ಇದು ಕೇವಲ ಒಕ್ಕಲಿಗ ಸಮುದಾಯದ ಹೋರಾಟವಲ್ಲ, ಬದಲಾಗಿ ಯಾರೇ ಆಗಲಿ ಯಾವುದೇ ಜಾತಿ, ಧರ್ಮ ಅಥವಾ ಸಂಪ್ರದಾಯಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ನಿಲ್ಲಬೇಕು. ಇಂತಹ ಅಯೋಗ್ಯರನ್ನು ಈ ಕೂಡಲೇ ಬಂಧಿಸಬೇಕು" ಎಂದು ಹೇಳಿದರು.

ಮುಳಬಾಗಿಲು ತಾಲ್ಲೂಕು ಒಕ್ಕಲಿಗರ ಸಂಘದ ಪರವಾಗಿ ಒಕ್ಕೂಟದ ಕಾರ್ಯಕರ್ತ ರೋಹನ್ ಗೌಡ ಮಾತನಾಡಿ, "ನಮ್ಮ ಒಕ್ಕೂಟ ಕೇವಲ ಹೇಳಿಕೆಗಳನ್ನು ನೀಡುವುದಲ್ಲ. ನಾವು ಸೀತಾರಾಮ್ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲು ಸಂವಿಧಾನಾತ್ಮಕ ರೀತಿಯಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ" ಎಂದು ತಿಳಿಸಿದರು.

ಇಂತಹ ಘಟನೆಗಳು ಜಾತಿ ಮತ್ತು ಧರ್ಮಗಳ ನಡುವೆ ದ್ವೇಷವನ್ನು ಸೃಷ್ಟಿಸಿ ದೇಶದ ಏಕತೆಯನ್ನು ಒಡೆಯುವ ಹುನ್ನಾರಗಳಾಗಿವೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಅಪರಾಧಿಯನ್ನು ಕೂಡಲೇ ಜೈಲಿಗೆ ಕಳುಹಿಸಬೇಕು ಎಂದು ಒಕ್ಕೂಟದ ಸದಸ್ಯರು ಒತ್ತಾಯಿಸಿದ್ದಾರೆ.