ಕೋಲಾರ ಒಕ್ಕಲಿಗರ ಸಂಘ: 40 ವರ್ಷಗಳ ನಿರ್ಲಕ್ಷ್ಯದ ಇತಿಹಾಸಕ್ಕೆ ಸೆಡ್ಡು ಹೊಡೆದು, ಸಮುದಾಯದ ಸಬಲೀಕರಣಕ್ಕೆ ದಿಟ್ಟ ಹೆಜ್ಜೆ!

ಕೋಲಾರ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ಸಬಲೀಕರಣಕ್ಕಾಗಿ ಕೈಗೊಂಡ ಮೊದಲ ಹೆಜ್ಜೆಯು ದಶಕಗಳಿಂದಲೂ ನಿಷ್ಪ್ರಯೋಜಕವಾಗಿತ್ತು. ಜಿಲ್ಲಾ ಒಕ್ಕಲಿಗರ ಸಂಘದ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯದಿಂದಾಗಿ, ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡಲು ಅಂತಿಮವಾಗಿ ರಾಜ್ಯ ಒಕ್ಕಲಿಗರ ಸಂಘವೇ ಜವಾಬ್ದಾರಿ ವಹಿಸಿಕೊಳ್ಳುವ ಅನಿವಾರ್ಯತೆ ಎದುರಾಯಿತು. ಈ ಸಂಚಲನದ ಹಿಂದಿನ ಪ್ರೇರಕ ಶಕ್ತಿ, ಜಿಲ್ಲೆಯ ಯುವ ನಾಯಕರ ಒಕ್ಕೂಟದ ರೂವಾರಿಯಾಗಿ, ನಾನು ಈ ಬೆಳವಣಿಗೆಯನ್ನು ಸಮುದಾಯದ ಮುಂದೆ ಇಡುತ್ತಿದ್ದೇನೆ.

FEDERATION ACTIVITIESCOMMUNITY BLOGS

Rohan Gowda

11/5/20251 min read

ಕೋಲಾರ ಒಕ್ಕಲಿಗರ ಸಂಘ: 40 ವರ್ಷಗಳ ನಿರ್ಲಕ್ಷ್ಯದ ಇತಿಹಾಸಕ್ಕೆ ಸೆಡ್ಡು ಹೊಡೆದು, ಸಮುದಾಯದ ಸಬಲೀಕರಣಕ್ಕೆ ದಿಟ್ಟ ಹೆಜ್ಜೆ!

ವಿದ್ಯಾ ಗುರು ಶ್ರೀ ಶ್ರೀ ಶ್ರೀ ಮಂಗಳನಾಥ ಮಹಾ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಶಂಕುಸ್ಥಾಪನೆ

ವಿಚಾರ ವಿಮರ್ಶೆ: ROHAN GOWDA

ಮುಳಬಾಗಿಲು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರು ಮತ್ತು ಕೋಲಾರ ಜಿಲ್ಲಾ ಒಕ್ಕಲಿಗರ ಪರ ಸಂಘ ಸಂಸ್ಥೆಗಳ ಒಕ್ಕೂಟದ ಪ್ರಮುಖರು

ಕೋಲಾರ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ಏಳಿಗೆಗಾಗಿ ಕೈಗೊಂಡ ಮೊದಲ ಹೆಜ್ಜೆಯು ನಾಲ್ಕು ದಶಕಗಳಿಂದಲೂ ನಿಷ್ಪ್ರಯೋಜಕ ಸ್ಥಿತಿಯಲ್ಲಿತ್ತು. ಜಿಲ್ಲಾ ಒಕ್ಕಲಿಗರ ಸಂಘದ ಸಂಪೂರ್ಣ ನಿಷ್ಕ್ರಿಯತೆ ಮತ್ತು ನಿರ್ವಹಣಾ ಲೋಪದಿಂದಾಗಿ, ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡಲು ಅಂತಿಮವಾಗಿ ರಾಜ್ಯ ಒಕ್ಕಲಿಗರ ಸಂಘವೇ ಜವಾಬ್ದಾರಿ ವಹಿಸಿಕೊಳ್ಳುವ ಐತಿಹಾಸಿಕ ಅನಿವಾರ್ಯತೆ ಎದುರಾಯಿತು. ಈ ಸಂಚಲನದ ಹಿಂದೆ ಜಿಲ್ಲೆಯ ಸಮುದಾಯದ ಹಿರಿಯರು ಮತ್ತು ಯುವ ನಾಯಕರ ಸಾಮೂಹಿಕ ಪ್ರಯತ್ನವಿದೆ.

40 ವರ್ಷಗಳ ದುರಾಡಳಿತ ಮತ್ತು ಕೆ.ವಿ. ಶಂಕರಪ್ಪನವರ ನಿರ್ಲಕ್ಷ್ಯ

ಜಿಲ್ಲೆಯಲ್ಲಿ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ವಸತಿ ವ್ಯವಸ್ಥೆ ಕಲ್ಪಿಸಲು ಸ್ಥಳ ಕರೀದಿ ನಡೆದಾಗ, ಪ್ರಸಕ್ತ 40 ವರ್ಷಗಳಿಂದ ಸುದೀರ್ಘ ಚುನಾವಣೆ ನಡೆಸದೆ ಅಧ್ಯಕ್ಷೀಯ ಸ್ಥಾನ ಅಲಂಕರಿಸಿರುವ ಶ್ರೀ ಕೆ.ವಿ. ಶಂಕರಪ್ಪನವರ ನೇತೃತ್ವದಲ್ಲಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ವಕೀಲರೇ ಆಗಿದ್ದರೂ ಸಹ, ಸಮುದಾಯಕ್ಕೆ ಪಕ್ವವಲ್ಲದ ಸ್ಥಳವನ್ನು ನೀಡುವ ಮೂಲಕ ಆವತ್ತಿನ ಸ್ಥಳ ಕರೀದಿಯಲ್ಲಿ ಮೋಸ ನಡೆದಿದೆ ಎಂಬುದು ಗಂಭೀರ ವಿಷಯ.

ಈ ಸುದೀರ್ಘ 40 ವರ್ಷಗಳ ಕಡೆಗಣನೆಯಿಂದಾಗಿ, ವಿದ್ಯಾರ್ಥಿ ವಸತಿ ಆಸರೆ ನೀಡಬೇಕಾಗಿದ್ದ ಸಂಘದ ಕಟ್ಟಡದಲ್ಲಿ ಯಾವುದೇ ಪ್ರಯೋಜನ ನಡೆದಿಲ್ಲ. ದುರಂತವೆಂದರೆ, ನಡೆಯುತ್ತಿದ್ದ ಒಂದೇ ಒಂದು ವಿದ್ಯಾರ್ಥಿ ಹಾಸ್ಟೆಲ್ ಅನ್ನು ಸಹ ಮುಚ್ಚಿಸಿ, ನಿಷ್ಕ್ರಿಯಗೊಳಿಸಿದ 'ಕೀರ್ತಿ' ಕೆ.ವಿ. ಶಂಕರಪ್ಪ ಅಧ್ಯಕ್ಷತೆಯ ಕೋಲಾರ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಸಲ್ಲುತ್ತದೆ.

ಸಾಮೂಹಿಕ ಐಕ್ಯತೆಯ ಶಕ್ತಿಯಿಂದ ಸಂಚಲನ: ನಾಯಕತ್ವದ ಬೆಳಕು

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಜಿಲ್ಲೆಯಾದ್ಯಂತ ಹಲವಾರು ಸಮುದಾಯದ ಹಿತಾಸಕ್ತರು ಮತ್ತು ಯುವಕರು ಒಂದಾಗಿ ಈ ನಿರ್ಲಕ್ಷ್ಯವನ್ನು ಪ್ರಶ್ನಿಸಿದರು. ಜಿಲ್ಲಾ ಒಕ್ಕೂಟವನ್ನು ಸಕ್ರಿಯಗೊಳಿಸುವಲ್ಲಿ ಮತ್ತು 40 ವರ್ಷಗಳ ದುರಾಡಳಿತವನ್ನು ಎತ್ತಿ ಹಿಡಿಯುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ.

  • ಒಕ್ಕೂಟದ ಪ್ರಮುಖ ಸಂಘಟನೆಗಳು: ಮಾಲೂರಿನ ಜಿಲ್ಲಾ ಒಕ್ಕಲಿಗರ ಮಹಾ ಒಕ್ಕೂಟ, ವೇಮಗಲ್ಲಿನ ಕೆಂಪೇಗೌಡರ ಯುವ ಸಮಿತಿ, ಶ್ರೀನಿವಾಸಪುರ ತಾಲೂಕು ಒಕ್ಕಲಿಗರ ಸಂಘ ಹಾಗೂ ಮುಳಬಾಗಿಲು ತಾಲೂಕು ಒಕ್ಕಲಿಗರ ಸಂಘ (ರೋಹನ್ ಗೌಡರ ನೇತೃತ್ವದಲ್ಲಿ).

  • ಪ್ರಮುಖ ಮುಖಂಡರುಗಳು: ಮಾಲೂರಿನ ಲಕ್ಷ್ಮಿಕಾಂತ್ ಗೌಡರು, ಪಾಲಾಕ್ಷಗೌಡರು, ವರುಣ್ ಗೌಡರು, ಅಶೋಕ್ ಗೌಡ್ರು, ಲೋಕೇಶ್ ಗೌಡರು, ನರಸಿಂಹ ಗೌಡರು. ಕೋಲಾರದ ರಾಜಪ್ಪನವರು, ವಕೀಲರು ರತ್ನಮ್ಮನವರು, ವಕೀಲರಾದ ರವಿಕುಮಾರ್ ಆರ್ ರವರು, ರಾಮಚಂದ್ರ ಗೌಡ್ರು, ಶ್ರೀನಿವಾಸ ಗೌಡ್ರು, ಕೃಷ್ಣಪ್ಪನವರು (ಡಾಕ್ಟರ್ ರಮೇಶ್ ರವರ ತಂದೆ), ಮತ್ತು ಹಿಂದಿನಿಂದಲೂ ಶ್ರಮಿಸಿದ ಚಿದಾನಂದ ಮೇಷ್ಟ್ರು.

  • ಶ್ರೀನಿವಾಸಪುರ ಮತ್ತು ಮುಳಬಾಗಿಲಿನಿಂದ: ರೋಹನ್ ಗೌಡ್ರು, ಯುವ ವೇದಿಕೆಯ ಟೊಮೇಟೊ ಮಂಡಿಯ ಸಿವಿ ಶ್ರೀನಿವಾಸ್, ವೇಣು, ಎಡ ಹಳ್ಳಿಯ ಮೋಹನ್, ಶಂಕರ್ ರೆಡ್ಡಿ, ತಿರುಮಲೇಶ್ ಗೌಡ್ರು, ರವಿ ಗೌಡ್ರು, ವಕೀಲರಾದ ನಾಗರಾಜ್ ರವರು, ಶಿಕ್ಷಕರು ಸುರೇಂದ್ರ ರೆಡ್ಡಿ, ಮಿಟ್ಟೂರು ನಾಗೇಶ್ ಗೌಡ, ಶ್ರೀನಿವಾಸಪುರ ಸರಸ್ವತಿ, ಲೋಕೇಶ್ ರವರು ಹಾಗೂ ಇನ್ನೂ ಅನೇಕರು.

ಈ ಎಲ್ಲರೂ ಒಟ್ಟಾಗಿ, 40 ವರ್ಷಗಳಿಂದ ಚುನಾವಣೆ ನಡೆಸದಿರುವ ವಿಚಾರವನ್ನು ಎತ್ತಿ ಹಿಡಿದು, ಹೊಸ ನಾಯಕತ್ವ ಬೆಳೆಸಬೇಕು ಎಂಬ ನಿರ್ದೇಶನವನ್ನು ಕೆ.ವಿ. ಶಂಕರಪ್ಪ ಮತ್ತು ಅವರ ತಂಡಕ್ಕೆ ತಿಳಿಸಿದ್ದರಿಂದ ಜಿಲ್ಲಾದ್ಯಂತ ಭಾರೀ ಸಂಚಲನ ಮೂಡಿತು. ಈ ಸಾಮೂಹಿಕ ಪ್ರಯತ್ನದ ಮೂಲ ಸೆಲೆಯಾಗಿ ರೋಹನ್ ಗೌಡರು ತಮ್ಮ ಸಂಘವನ್ನು ಒಕ್ಕೂಟದೊಂದಿಗೆ ಸೇರಿಸಿ, ಹೋರಾಟಕ್ಕೆ ಮತ್ತಷ್ಟು ಬಲ ನೀಡಿದರು.

ರಾಜ್ಯ ಸಂಘದ ಸಹಕಾರ ಮತ್ತು ದೇವರಾಜ್ ಅವರ ಪ್ರಮುಖ ಪಾತ್ರ

ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಮನದಟ್ಟು ಮಾಡಿಕೊಂಡ ರಾಜ್ಯ ಒಕ್ಕಲಿಗರ ಸಂಘದ ಪ್ರಸಕ್ತ ನಿರ್ದೇಶಕರುಗಳಾದ ಶ್ರೀ ಕೋನಪ ರೆಡ್ಡಿ, ಡಾಕ್ಟರ್ ರಮೇಶ್ ಹಾಗೂ ಎಲುವಹಳ್ಳಿ ರಮೇಶ್ ಅವರು ಕೂಡಲೇ ಕಾರ್ಯಪ್ರವೃತ್ತರಾದರು. ಅವರು 1906ರ ಒಕ್ಕಲಿಗರ ಸಂಘದ ಮೂಲ ಸಿದ್ಧಾಂತಕ್ಕೆ ಮತ್ತೊಮ್ಮೆ ಜೀವ ತುಂಬಿ, ಸ್ಥಗಿತಗೊಂಡಿದ್ದ ಕೋಲಾರದ ಒಕ್ಕಲಿಗರ ವಿದ್ಯಾರ್ಥಿ ವಸತಿಗೃಹ (ಹಾಸ್ಟೆಲ್) ನಿರ್ಮಿಸುವ ದೃಢಸಂಕಲ್ಪ ತೊಟ್ಟರು.

ಈ ಕಾರ್ಯಕ್ಕೆ ಮತ್ತಷ್ಟು ಪ್ರಗತಿ ನೀಡಲು ಪ್ರಮುಖ ಕಾರಣರಾದವರು, ಕೋಲಾರ ತಾಲೂಕಿನ ಸಮುದಾಯದ ನಿಜವಾದ ಚಿಂತಕರಾಗಿರುವ ಮತ್ತು ಪೊಲೀಸ್ ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿರುವ ಕೋರ್ಗಂಡ ಹಳ್ಳಿಯ ಶ್ರೀ ದೇವರಾಜ್ ರವರು. ಅವರ ನಿಸ್ವಾರ್ಥ ಕಾಳಜಿಯು ಈ ಮಹತ್ಕಾರ್ಯದ ಯಶಸ್ಸಿಗೆ ಬಲ ತುಂಬಿತು.

ಇವರೆಲ್ಲರ ಸಮುದಾಯದ ಕಾಳಜಿಯುಕ್ತ ಪ್ರಯತ್ನದಿಂದ, ವಿದ್ಯಾರ್ಥಿ ವಸತಿ ವ್ಯವಸ್ಥೆಯ ಶಂಕುಸ್ಥಾಪನಾ ಸಮಾರಂಭವು ಇದೇ ದಿನಾಂಕ 5 ರಂದು (ಇಂದು) ಪವಿತ್ರವಾಗಿ ನೆರವೇರಿತು. ವಿದ್ಯಾ ಗುರು ಶ್ರೀ ಶ್ರೀ ಶ್ರೀ ಮಂಗಳನಾಥ ಮಹಾ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಈ ಪ್ರಮುಖ ಧಾರ್ಮಿಕ ವಿಧಿ ನೆರವೇರಿಸಲಾಯಿತು, ಇದು ಕೋಲಾರದ ಒಕ್ಕಲಿಗ ಸಮುದಾಯದ ಶೈಕ್ಷಣಿಕ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದೆ.

ಸಾಮೂಹಿಕ ಜವಾಬ್ದಾರಿಯ ಕುರಿತು ಮನವಿ

ಕೋಲಾರ ಜಿಲ್ಲಾ ಒಕ್ಕಲಿಗರ ಪರ ಸಂಘ ಸಂಸ್ಥೆಗಳ ಒಕ್ಕೂಟದಿಂದ ನಾವೆಲ್ಲರೂ ಸಮುದಾಯದ ಕುಲಬಾಂಧವರನ್ನು ವಿನಂತಿಸುವುದೇನೆಂದರೆ: ಇನ್ನಾದರೂ ಜಾಗೃತರಾಗಿ! ಯೋಗ್ಯರಲ್ಲದ ವ್ಯಕ್ತಿಗಳನ್ನು ಸಮುದಾಯದ ನಾಯಕರು ಎಂದು ಬಿಂಬಿಸುವುದನ್ನು ನಿಲ್ಲಿಸಿ. ಕೇವಲ ರಾಜಕೀಯ ಲಾಭಕ್ಕಾಗಿ ಸಮುದಾಯವನ್ನು ಬಳಸಿಕೊಂಡು, ನಂತರ ಸಮುದಾಯಕ್ಕೆ ಸೊಪ್ಪು ಹಾಕದವರನ್ನು ನಾವು ದೂರ ಇಡಬೇಕು.

ಕಾನೂನಿನ ಚೌಕಟ್ಟಿನಲ್ಲಿ ಸಂಘದ ಚುನಾವಣೆ ಮತ್ತು ಅದರ ಪರಿಪಾಲನೆಯನ್ನು ಕಾಪಾಡುವ ಹೊಣೆಗಾರಿಕೆ ಪ್ರತಿಯೊಬ್ಬ ಒಕ್ಕಲಿಗನ ಮೇಲಿದೆ. ಇಂದಿನ ನಿಮ್ಮ ನಡೆ, ಮುಂದಿನ ನಿಮ್ಮ ಮಕ್ಕಳ ಭವಿಷ್ಯ ಎಂಬುದನ್ನು ಮರೆಯದಿರಿ.

ವಿಚಾರ ವಿಮರ್ಶೆ

ರೋಹನ್ ಗೌಡ

ಸಮುದಾಯದ ಸೇವೆಯಲ್ಲಿ